ನಿರ್ಗುಣತ್ವ -
	ಗುಣವಿಲ್ಲದಿರುವ ಸ್ವಭಾವ. ಅಂದರೆ ಈ ಪದದ ಅರ್ಥ ಮತ್ತು ವ್ಯಾಪ್ತಿ ಗುಣದ ಕಲ್ಪನೆಯನ್ನು ಅನುಸರಿಸುತ್ತದೆ. ಗುಣವನ್ನು ನಾಲ್ಕು ವಿಭಾಗಗಳಲ್ಲಿ ಪರಿಶೀಲಿಸಬಹುದು. 1 ಸಾಂಖ್ಯ ದರ್ಶನದಲ್ಲಿರುವ ಮೂರು ಗುಣಗಳು. ಅವು ಸತ್ವ ಮೊದಲಾದುವು; 2 ನ್ಯಾಯವೈಶೇಷಿಕ ದರ್ಶನದ ರೂಪ ರಸಾದಿ 24 ಗುಣಗಳು. 3 ಸಾಮಾನ್ಯವಾಗಿ ಬಳಕೆಯಲ್ಲಿರುವಂತೆ ಒಂದು ವಸ್ತುವಿನ ಸ್ವಭಾವ ನಡವಳಿಕೆ ಇತ್ಯಾದಿಗಳ ಸಹಜ ಸ್ಥಿತಿಯನ್ನು ಸೂಚಿಸುವಂತಹುದು. 4 ದೋಷಕ್ಕೆ ವಿರುದ್ಧವಾದ ಗುಣ ಮತ್ತು ಅತಿಶಯ ಎಂಬ ಅರ್ಥವುಳ್ಳದ್ದು.

	ಸಾಂಖ್ಯ ದರ್ಶನದ ಪ್ರಕಾರ, ನಿರ್ಗುಣತ್ವ ಎಂಬುದು ಪುರುಷನ ಗುಣಾತೀತ ಸ್ಥಿತಿ. ಆ ದರ್ಶನದಲ್ಲಿರುವಂತೆ ಪುರುಷ ಪ್ರಕೃತಿಗಳು- ಇವು ಎರಡೇ ವಿಶ್ವತತ್ತ್ವಗಳು. ಪ್ರಕೃತಿ ಸತ್ಯಾದಿ ಮೂರು ಗುಣಗಳ ಒಕ್ಕೂಟ; ಪುರುಷ ನಿರ್ಗುಣ.

	ನ್ಯಾಯ ವೈಶೇಷಿಕರ ದೃಷ್ಟಿಯಲ್ಲಿ ಗುಣವಿಲ್ಲದೇ ದ್ರವ್ಯವಿರುವುದಿಲ್ಲ. ಆದುದರಿಂದ ಇವರಲ್ಲಿ ಗುಣರಹಿತ ವಸ್ತು ಎಂಬ ಅರ್ಥದಲ್ಲಿ ನಿರ್ಗುಣಕ್ಕೆ ಅವಕಾಶವಿಲ್ಲ.

	ವಸ್ತುಗಳು ಇಂದ್ರೀಯ ಗೋಚರವಾಗಲು ಸಾಧಕವಾದ ಅಂಶಗುಣ ಎನ್ನಬಹುದು. ಆಗ ನಿರ್ಗುಣ ವಸ್ತು ಒಂದಿದ್ದರೆ ಅದು ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ- ಎಂಬುದು ಸ್ಪಷ್ಟವಾಗುತ್ತದೆ. ಅಂತಹ ವಸ್ತವಿನ ಇರುವಿಕೆಯನ್ನು ಖಚಿತಪಡಿಸುವುದು ಸಾಧ್ಯಾಗದಿರಬಹುದು. ಆದರೆ, ಕೆಲವು ವೇದಾಂತ ಪಂಥಗಳಲ್ಲಿ ನಿರ್ಗುಣ ಸ್ಥಿತಿ ಇದೆ ಎಂದು ತಿಳಿಸುತ್ತಾರೆ.

ಶಂಕರಾಚಾರ್ಯರ ಮತದಲ್ಲಿ ಪರಬ್ರಹ್ಮ ನಿರ್ಗುಣ. ವಿಶ್ವವನ್ನು ಮೀರಿರುವ ಈ ಬ್ರಹ್ಮ ವಸ್ತುವಿಗೆ ಯಾವುದಾದರೂ ಗುಣವನ್ನು (ಉದಾಹರಣೆ: ಜಗತ್‍ಪ್ರಷ್ಕøತ್ವ) ಹೇಳಿದರೆ ಆ ವಸ್ತುವನ್ನು ಅಷ್ಟಕ್ಕೆ ಸೀಮಿತಗೊಳಿಸಿದಂತೆ ಆಗುತ್ತದೆ. ನಮ್ಮ ಇಂದ್ರಿಯಗಳಿಗೆ ತಿಳಿಯುವ ಎಲ್ಲಾ ಗುಣಗಳಿಗೂ ಬ್ರಹ್ಮನಿಗೂ ವಿಲಕ್ಷಣ ಸಂಬಂಧವಿರುವುದು. ಆದರೆ ಬ್ರಹ್ಮ ಎಲ್ಲ ಗುಣಗಳನ್ನು ಮೀರಿದೆ. ಆದ್ದರಿಂದ ಬ್ರಹ್ಮನನ್ನು ನಿರ್ಗುಣ ಎನ್ನಲಾಗುವುದು. ಅಂಥ ಬ್ರಹ್ಮವನ್ನು ನಮ್ಮ ತಿಳಿವಳಿಕೆ ಮಟ್ಟಕ್ಕೆ ತಂದು ಕೊಳ್ಳಲೋಸುಗ ಸರ್ವಜ್ಞ, ಸರ್ವಶಕ್ತ, ಸೃಷ್ಟಿಕರ್ತ ಇತ್ಯಾದಿಯಾಗಿ ಭಾವಿಸಿದರೆ, ಆಗ ಅದು ಸಗುಣ ಎನಿಸುತ್ತದೆ. ಈಶ್ವರ, ದೇವರು, ಭಗವಂತ ಇತ್ಯಾದಿಗಳೆಲ್ಲ ವಿಶ್ವಸೃಷ್ಟಿಯ ವ್ಯಾಪಾರದ ಸಂದರ್ಭದಲ್ಲಿ ಸಗುಣ ಬ್ರಹ್ಮನಿಗೆ ಅನ್ವಯವಾಗುದು. ಒಟ್ಟಿನಲ್ಲಿ ನಿರ್ಗುಣ ಬ್ರಹ್ಮ ತಾನೇ ತಾನಾಗಿ ವಾಙ್ಮನಗಳಿಗೆ ಗೋಚರಿಸದೇ ಇರತಕ್ಕದ್ದು. ಅದರ ಈ ಗುಣರಹಿತ ಸ್ಥಿತಿಯೇ ನಿರ್ಗುಣತ್ವ.

ರಾಮಾಜುನರ ಪಂಥದಲ್ಲಿ ಬ್ರಹ್ಮನಿಗೆ ಅನ್ವಯಿಸುವಂತೆ ನಿರ್ಗುಣ ಎಂದರೆ ಹೇಯವಾದು ಗುಣವಾವುದೂ ಇಲ್ಲದ್ದು ಎಂಬ ಅರ್ಥವಿದೆ. 
ಗುಣ ಎಂದರೆ ವಸ್ತುಗಳನ್ನು ಪರಸ್ಪರ ಪ್ರತ್ಯೇಕಿಸುವ ಒಂದು ವಿಶಿಷ್ಟ ಸ್ಥಿತಿ. ಅದು ಮೇಲ್ಮಟ್ಟದ್ದಾಗಿದ್ದರೂ ಇರಬಹುದು; ಕೆಳಮಟ್ಟದ್ದಾಗಿದ್ದರೂ ಇರಬಹುದು. ಅಂದ ಮೇಲೆ ಇಲ್ಲಿ ನಿರ್ಗುಣದ ಪ್ರಶ್ನೆ ಏಳಲಾರದು. 
ದೋಷಕ್ಕೆ ವಿಪರ್ಯಯದಾದುದು ಗುಣ. ಈ ಪ್ರಸಂಗಗಳಲ್ಲಿ ನಿರ್ಗುಣ ಎಂದರೆ ಗುಣವಿಲ್ಲದ್ದು ಎಂದು ಮಾತ್ರ ಹೇಳಬಹುದು; ದೋಷಯುತ ಎಂದು ಹೇಳಬೇಕಾಗಿಲ್ಲ. ಗುಣವಿಲ್ಲದ್ದಿದ್ದರೂ ದೋಷವಿರದ ಒಂದು ಸ್ಥಿತಿಯೂ ಇರಬಹುದಷ್ಟೆ. ಇದಕ್ಕೆ ಬೇರೆ ಹೆಸರಿಲ್ಲ; ಅದು ವಸ್ತುವಿನ ವಿಶೇಷ ಸ್ಥಿತಿ.

	ಗುಣ ಎಂದರೆ ಅತಿಶಯ ಎಂಬ ಅರ್ಥವಿರುವುದನ್ನು ಕಾಣಬಹುದು.

	ಹೀಗೆ ಸಾಪೇಕ್ಷ ಸ್ಥಿತಿಯನ್ನು ಸೂಚಿಸುತ್ತದೆ. ಗುಣತ್ವ ಇಲ್ಲದಿರುವುದು ನಿರ್ಗುಣತ್ವ. ಅದರ ಜೊತೆಗೆ ಸಹಜ ಸ್ಥಿತಿಯನ್ನು ಸೂಚಿಸುವ ಗುಣಕ್ಕೂ ವಿಲಕ್ಷಣವಾಗಿ ಅದನ್ನು ಮೀರಿರುವುದು ನಿರ್ಗುಣತ್ವ ಎನಿಸುತ್ತದೆ.
(ಆರ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ